Thursday, September 4, 2008

ಮತ್ತೆ ನಿನ್ನದೇ ನೆನಪು

ಮತ್ತೆ ನಿನ್ನದೇ ನೆನಪು, ನಿನ್ನ ಕಣ್ಣಿನಲ್ಲಿ ಸಣ್ಣ ತೆರೆ ನೀರು, ತುಟಿಗಳ ಕಂಪನ, ಮಾತುಗಳಲ್ಲಿ ಮಮತೆ ಕಂಡು ಆಗಾಗ ಕೊರಳ ಸೆರೆ ಉಬ್ಬಿ ಬಂದು ನೀನು ಅನುಭವಿಸಿದ ಯಾತನೆ, ಸಂಕಟ... ನಿನ್ನದು ದುಃಖ ಪಡುವ ಮನಸಲ್ಲ ಗೆಳತಿ, ಹಕ್ಕಿ ಗಾತ್ರದ ಆ ನಿನ್ನ ಜೀವಕ್ಕೆ ತಿಳಿ ರಾತ್ರಿಯಲ್ಲಿ ಚಂದ್ರನ ಜೊತೆ ಮಾತನಾಡಿ ನಿನ್ನ ದುಃಖ ಇಳಿಸುವುದು ಹೇಗೆ? ಕವಳದ ಹಂಬಲದಲ್ಲಿ ನೀನು 'ಗುಂಪು ಕಳೆದುಕೊಂಡ ಒಂಟಿ ಹಕ್ಕಿ'! ಅದು ಹಾಡಿ ಹಾಡಿ ಸಾಯುವ ಹೊತ್ತು.
ಅಂದದಂತಹ ಚಂದ್ರನೊಂದಿಗೆ ದೊಡ್ಡ ಕನಸಿನ ಮೂಟೆ ಹೊತ್ತು ಬೇಸರದ ದೀಣೆಗೆ ನಿದ್ರೆ ಬಾರದ ಹೊತ್ತು! ಈ ಜಗತ್ತು ಮನಸ್ಸಾರೆ ನಗಲು ಬಿಡುವುದಿಲ್ಲ, ಕಣ್ಣು ದಿಮ್ಮಿಕ್ಕಿ ಎದೆ ಬಿರಿದು ಅಳಲೂ ಬಿಡುವುದಿಲ್ಲ. ನಾನು ನಿನ್ನ ದುಃಖಗಳನ್ನು ನೆನಪಿಸುತಿಲ್ಲ, ಅವುಗಳನ್ನು ಮರೆಯಲು ಬಿದುತಿದ್ದೇನೆ...
ನಿನ್ನ ನಗೆ ನೀನೇ ಇಟ್ಟುಕೋ, ಹಾಗಂತ ನಾನು ನಿನ್ನ ನಗುವನ್ನು ಕಿತ್ತುಕೊಂಡೆ ಅಂತ ಮಾತ್ರ ಹೇಳಬೇಡ.
ಆ ನಿನ್ನ ನಗುವನ್ನು ನೀನೇ ಇಟ್ಟುಕೋ, ನಿನ್ನ ನಿಟ್ಟುಸಿರಿನಲ್ಲಿ ನನಗಿಟ್ಟಿದ್ದ ಪಾಲು ಕೊಡು. ನಮಗೆ ದುಃಖವೊಂದೆ ಉಳಿದಿಲ್ಲ, ನಾವು ಎಷ್ಟೇ ಸಾಮನ್ಯರಾದರೂ ಅಸಾಮಾನ್ಯ ಸಂತೋಷಗಳನ್ನು ಅನುಭವಿಸಲು ಅರ್ಹರಾಗಿರುತ್ತೇವೆ. ಕಡುಬಡವನ ಮನೆಯಲ್ಲಿ ಹಬ್ಬ ನಡೆದ ಹಾಗೆ... ಅದು ಪುಟ್ಟ ಸಂತೋಷವೇ ಇರಬಹುದು ದೊಡ್ಡ ನೋವನ್ನು ಮರೆಸಲಿಕ್ಕೆ ಅಷ್ಟು ಸಾಕು.
ಪ್ರತಿ ದಿನ ಇದೇ ನೆನಪುಗಳು ನನ್ನನ್ನು ಕಾಡಿ ಮನೆಯಿಂದ ಮರಳಿ ಹೊರಗೆ ಬಂದು ನಿನ್ನನ್ನು ಹುಡುಕದ ಜಾಗವಿಲ್ಲ, ತಡಕದ ತಾಣವಿಲ್ಲ, ನಾನಿಲ್ಲಿ ಕುಳಿತು ನಿನ್ನ ಭಜನೆ ಮಾಡುತ್ತಿರುವಾಗ ನೀನೇನು ಮಾಡುತ್ತಿರುವೆ. ನನ್ನ ಹೆಸರಿನಲ್ಲಿ ಪೂಜೆ ಮಾಡಿಸಿದವಳು, ಮನಸಿನಲ್ಲಿಟ್ಟೂ ಪೂಜಿಸಿದವಳು, ದೇವರ ಪ್ರತಿರೂಪವಂತೆ ತಿಳಿದು ನನ್ನ ಮಗುವಾಗಿಸಿದವಳು. ನನ್ನ ಕಂಬನಿಗಳನ್ನು ಬೊಗಸೆಯಲ್ಲಿ ಹಿಡಿದವಳು. ನನ್ನ ಸಿಡಿಮಿಡಿಗೆ ಮಗುವಂತೆ ಅತ್ತವಳು. ನನ್ನ ಗುಲಾಬಿ ಮುಡಿದವಳು. ನಾನು ನಾನಗಿದ್ದೆ! ಪ್ರಪಂಚದ ಸಂಭಂದನೆ ಇರದಂತೆ ಇದ್ದೆ ಆಗಲೇ ನಿನ್ನ ಪ್ರೀತಿ ಜೊತೆಯಾದದ್ದು, ನೀನಾಗಿ ನನ್ನನ್ನು ನಿನ್ನ ಚೆಂದದ ಗೆಳೆಯ ಅಂದುಕೊಂಡದ್ದು, ಆದರೆ ನಿನ್ನ ನೋಡಿದ ದಿನವೇ ನಿನ್ನನ್ನು ಪ್ರೀತಿಸಿಬಿಟ್ಟೆ, ಇದು ನಿನಗೆ ಇಷ್ಟವಾಗದಿದ್ದರು ನಾನು ನಿನಗೆ ಇಷ್ಟವಾದೆ. ಪ್ರೀತಿ ನಮ್ಮಿಬ್ಬರನ್ನು ಬಂದಿಸಿತು. ಆಗ ನೀನು ಎಷ್ಟು ಚೆನ್ನಗಿದ್ದಿ.... ತಿಳಿ ಗಗನದ ಚಂದ್ರನ ಮೊಗದಂತೆ ಹೊಳೆಯುತಿದ್ದೆ. ಎಲ್ಲಾ ಸಮಯದಿ ಚಂದಗೆ ನಗುತಿದ್ದಿ, ಈಗಲೂ ಕೂಡ.
ಎ ಭೂಲೋಕದಲ್ಲಿ ಇದುವರೆಗೆ ನಂಗೆ ಯಾರು ಇಷ್ಟವಾಗಿರಲಿಲ್ಲ,ಆಗ ನಿನ್ನ ಒಳ್ಳೆಯ ಮನಸ್ಸು ಇಷ್ಟವಾಯ್ತು ಅಂದೆ, ನನಗೂ ಕೂಡ ನಿನ್ನ ಮುದ್ದು ಮುಖ, ಕೋಮಲ ಕೂದಲು, ಸುಂದರ ನಗು ಇಷ್ಟವಾಯ್ತು. ಅಂದಿನಿಂದ ನಾನು ಬದಲಾದೆ. ಅಂದೇ ಆಕಾಶದೀವಿಯ ಕೊನೆಯ ನಕ್ಷತ್ರಕ್ಕೆ ರಾಣಿ ಎಂದು ಹೆಸರಿಟ್ಟೆ. ಜೀವ ಬದುಕಿದರೆ ನಿನಗಾಗಿ! ಅಂಗೈಯಲ್ಲಿ ಕರ್ಪೂರ ಹಚ್ಚಿಕೊಂಡು ಬದುಕಿನ ಕತ್ತಲು ಕಳೆಯುವವಳಿಗಾಗಿ ಬೆಳಕಾಗಬೇಕೆಂದು ನಿರ್ಧರಿಸಿದೆ. ಅವಳಿಗಾಗಿ ನಮ್ಮೂರ ದೇವತೆಗೆ ಉರುಳುಸೇವೆಯ ಅರಕೆಯನ್ನು ಹೊತ್ತು, ತೀರಿಸಿಯು ಬಿಟ್ಟೆ :).

ಕನಸು ಕಾಣುವುದು ಅತಿಯಾದಾಗ ಏಣಿ ಆಕಾಶಕ್ಕೆ ಹಾಕಿದರೂ ಬುಡ ನೆಲದ ಮೇಲಿರಲಿ ಎಂದು ನಾನೇ ಹೇಳಿಕೊಂಡೆ. ಪ್ರತಿ ದಿನ ನಿನ್ನ ನೋಡುವ, ಮಾತನಾಡುವ ಬಯಕೆಗಳು ಹೆಚ್ಚಾದವು. ಇಬ್ಬರು ಸ್ಪರ್ಧೆಗಿಳಿದಂತೆ ಒಬ್ಬರಿಗಿಂತ ಒಬ್ಬರು ಜಾಸ್ತಿ ಪ್ರೀತಿಸಿದೆವು. ಎದುರು ಬಂದರೆ ಭಯ, ಅಂಜಿಕೆ, ನಾಚಿಕೆ, ಕಣ್ಣುಗಳು ಮಾತ್ರ ಮಾತನಾಡಿದವು. ನಿನ್ನ ಜೊತೆ ಮಾತನಾಡ ಬೇಕೆಂದಾಗ, ಆಕಾಶದಲ್ಲಿನ ಆಗಂತಕ ಶೂನ್ಯದ ಬಯಲ ತುದಿಯ ಮೌನ ನಿಲ್ದಾಣದಲ್ಲಿ ನಿಂತಿರುತಿದ್ದೆ, ನಾನು ಎಣಿಸಿ ಏಳು ಹೆಜ್ಜೆಗಳಲ್ಲಿ ಆ ಸಮುದ್ರ ದಾಟಿ ಬಂದು ಬಿಡುತಿದ್ದೆ. ಇನ್ನು ಮೌನದ ಸಂಬಾಷಣೆ. ನೀನು ಹೊರಡುವೆನೆಂದಾಗ ನಾನು ಹೋಗುವಿಯಂತೆ ಅವಸರವೇತಕೆ ಕೊಂಚ ಮಾತನಾಡುವುದಿದೆ ಎಂದು ಕಣ್ ಚುಂಬಿಸಿದ ಗಳಿಗೆಯ ಸಾವಿಗೆ ಸಾಟಿಯೇ ಇಲ್ಲ.

ಊರಿಲ್ಲದ, ಮನೆ ಮಠವಿಲ್ಲದ ಕನಸು ಕಟ್ಟುವ ಜೋಗಿ ಜಂಗಮನಂತೆ ತ್ರಿವೇಣಿ ರಾತ್ರಿ ಬವಣೆಗಳು ಕಡಿವಾದವು. ಅರ್ಧರಾತ್ರಿಯಲ್ಲಿ ನೀನು ಕನವರಿಸಿದರೆ ಜೀವದ ತನಕ ನನ್ನ ಲಾಲಿಹಾಡು ಯಾವುದೇ ಜಾವದಲ್ಲಿ ನಾನು ನೀನಗಿತಿದ್ದೆ. 'ಮೊದಲ ಮಳೆಗೆ ಪುಳಕಗೊಂಡ ಮಗುವಿನ ಹಾಗೆ', 'ನನ್ನ ಕನಸಿನ ಮೌನದಲ್ಲಿ ಬಂದು ತಾಕಿದ ದನಿಯ ಹಾಗೆ', ನೀನು ನಿತ್ಯ ದೀಪಾವಳಿಯ ಆಕಾಶಬುಟ್ಟಿ ಎದುರು ಬಂದಾಗ ಕಣ್ಣ ನೋಟದಲ್ಲೇ ಎದೆಯ ಬಾಗಿಲಿಗೆ ಬೆಂಕಿ ಇಟ್ಟು ನಾಲ್ಕು ಜನರ ಮಧ್ಯೆ ಕಾಡಿ ನನ್ನ ಪ್ರಾಣ ಬೇಕಾದರೂ ಕೊಡ್ತಿನಿ ಎಂದು ಹೇಳಿದ್ದಂತು ಮರೆಯಲು ಸಾಧ್ಯನಾ? ಈ ದಿನಗಳು ಹೇಗಿದ್ದೆವು, ನೋಡಿಯೂ ನೋಡದ ಹಾಗೆ, ಮುಟ್ಟಬೇಡ ದೂರ ಎಂದು ನೀನು ಹೇಳಿದ ಕ್ಷಣಗಳು ಅವಕಾಶ ಕೊಡದ ಹಾಗೆ ಹೇಗಿದ್ದವು, ಆದರೆ ನನಗೆ ನೆನಪಿದೆ ಅಂದು ಶುಕ್ರವಾರ ಮುಸ್ಸಂಜೆ ವೇಳೆ ಮಗುವಂತೆ ನಾನು ನಿನ್ನ ಮಡಿಲಲ್ಲಿ ಮಲಗಿದ್ದೆ ನೀನು ನನಗೆ ಗೊತ್ತೇ ಆಗದಂತೆ, ನಿನಗೂ ಗೊತ್ತಿಲ್ಲದೆ ಅಡ್ಡ ಹಿಡಿದು ತುಟಿಗೊಂದು, ಕೆನ್ನೆಗೆರಡು, ಹಣೆಗೆ ಮೂರು ಅಂತ ಮುತ್ತು ಕೊಟ್ಯಲ್ಲ ಅಮ್ಮಣ್ಣಿ, ಮತ್ತೆ ನಾನದನ್ನು ತಿರುಗಿಸಲು ಮುಂದಾದಾಗ ತಡೆದ ಗಳಿಗೆ. ಆ ದಿನ ನನಗೆ ಊಟ ಇಲ್ಲ, ನಿದ್ರೆ ಇಲ್ಲ, ಕನಸು ಬರಲಿಲ್ಲ, ನೀನು ಕೈ ಹಿಡಿದಿದ್ದು, ಮುತ್ತಿಟ್ಟು ಮನದಲ್ಲೇ ಮಾತನಾಡಿದ್ದು ಎಲ್ಲವೂ ನೆನಪಾಗುತ್ತಿತ್ತು. ಆದರೆ ದೇವರು ಏನೆಂದು ಕೊಳ್ಳುತ್ತಾನೋ ಎಂದು ನೀನು ಸುಮ್ಮನಾದೆ ನಾನು ಮೊದಲಿನಂತೆಯೇ ಉಳಿದೆ.
ನಾವಿಬ್ಬರೂ ಕೂತು ಹಂಚಿದ ಮಾತುಗಳು ಸಾವಿರ, ನಾವಿಬ್ಬರೂ ನಕ್ಕ ನಗೆಗಳ ಲೆಕ್ಕ ಗೊತ್ತಿಲ್ಲ, ನಗುವಿನಂಗಡಿಯಲ್ಲೂ ಇಲ್ಲವಂತೆ, ಆದರೆ ನನ್ನನ್ನು ಕಂಡಾಗ ನನ್ನನ್ನು ಕಂಡಾಗ ನಿನ್ನ ಕಣ್ತುಂಬಿ ಬರುವ ಉಪ್ಪು ನೀರು ಮಾತ್ರ ನನ್ನ ನೆನಪಿನಲ್ಲಿದೆ. ನನಗೆ ಅರಿವಿಲ್ಲದೆ ಮಾಡಿದ ಪ್ರೀತಿಯ ತಪ್ಪಲ್ಲಿ ಮತ್ತೊಂದು ಹಕ್ಕಿಯ ಉಸಿರು ಸೇರಿದೆ ಎಂದು ಮುಚ್ಚಿಟ್ಟಿದ್ದ ಕನಸುಗಳನ್ನ ಬಿಚ್ಚದೆ ತರುತಿದ್ದೆ. ಪೆದ್ದು ಎಂದು ನೀನು ನೀನು ಹೇಳಿದ ಮಾತುಗಳು ಕೊನೆಗೂ ನನ್ನ ಪೆದ್ದನಾಗಿಸಿವೆ. ಸಹಾಯ ಹಸ್ತ ನೀಡುವೆನೆಂದು ಕೈ ಮುಂದಿಟ್ಟಾಗ ಬೆರಳು ತಗುಲಿದ ಹೆಣ್ಣೊಂದು ಬಂದು ಪ್ರೀತಿಯ ಬೇಡ್ತಿದೆ. ಆದರೆ, ನನ್ನ ಮನಸು ಅವಳ ಕಷ್ಟಗಳ ನೋಡ್ತಿದೆ ಹೊರತು ಪ್ರೀತಿಯ ಬಯಕೆಯಲ್ಲ ಗೆಳತಿ. ತಪ್ಪಾಗಿ ತಿಳಿದು ದೂರ ಹೋಗ್ತಿದ್ದಿಯ, ನಿನ್ನ ದಾರಿ ಸುಖವಾಗಿರಲಿ, ಆ ನಿನ್ನ ಬಾಳಲ್ಲಿ ನಾನು ಎಂದೆಂದೂ ಬೆಳಕಾಗಿರುತ್ತೇನೆ. ಇನ್ನೂ ಎಷ್ಟುದಿನ ಹೇಗೆ ಕಾಯುವುದು?... ಸತ್ತು ಹೋಗೋವರೆಗೂ ಹೀಗೆ ಕಾಯ್ತಾನೆ ಇರ್ತೀನಿ ಅಂತ ಹೇಳಲಾರೆ, ನನ್ನ ಅರ್ಥ ಮಾಡ್ಕೋತಿಯ ಅಂತ ಕಾಯ್ತಾನೇ ಯಾವತ್ತೋ ಒಂದು ದಿನ ಸತ್ತು ಹೋಗ್ತೀನಿ ಅಂತ ಮಾತ್ರ ಹೇಳಬಲ್ಲೆ. ನಾನಿಲ್ಲಿ ದುಹಖದಲ್ಲಿದ್ದೆನೆಂದು ತಿಳಿಯಬೇಡ, ಇಲ್ಲಿ ನನಗೆ ಸಂತೋಷವಿಲ್ಲ ಅಷ್ಟೆ. ನೀನಿಲ್ಲದೆ ನನ್ನ ಎಲ್ಲವೂ ನಶ್ವರ, ನಿನ್ನನ್ನ ನೋಡುವ ಆಸೆಯಾಗಿದೆ, ಹಸಿರು ಸೀರೆ ಉಟ್ಟು ರಾತ್ರಿ ಕನಸಿಗೆ ಬರ್ತಿಯಾ? ಒಬ್ಬಟ್ಟನ್ನು ಮರೆಯದೆ ತರ್ತಿಯಾ? ನೀನು ಸೀರೆ ಹಾಕೊಂಡು ಬಂದಂದೆ ನನಗೆ ಹಬ್ಬ....

ಮಾತಲ್ಲಿ ಹೇಳಲಾಗದೆ... ಅಕ್ಷರಗಳಾಗಿ ನಿನ್ನ ಮುಂದೆ ಇರಿಸಿದ್ದೇನೆ ಓದಿದಮೇಲೆ ನನ್ನಕಡೆ ತಿರುಗ್ತಿಯ ಅಲ್ವ?


- ಕೆ ಎಸ್ ರಾಜು

1 comment: